[ನ್ಯಾಯ ವ್ಯವಸ್ಥೆಯಲ್ಲಿ ಸತ್ಯಕ್ಕಾಗಿ ಪರದಾಡುವುದು, ಸತ್ಯವನ್ನು ಸುಳ್ಳಾಗಿಸಿ ನಿರಾಪರಾಧಿಯನ್ನು ಅಪರಾಧಿ ಸ್ಥಾನಕ್ಕೆ ತಳ್ಳುವುದು ಇಂದಿನ ನ್ಯಾಯ ವ್ಯವಸ್ಥೆಯಲ್ಲಿ ಹೆಚ್ಚಾಗಿರುವಾಗ, ಸತ್ಯದ ಕಾಗದಗಳು ಕೂಡ ಸುಳ್ಳಿನ ಪ್ರತಿಗಳಾಗಿ ನ್ಯಾಯ ದೇವತಯ ಎದುರಲ್ಲೆ ತಿರುಚಿ, ನ್ಯಾಯ ದೊರಕಲಿಕ್ಕೆ ವರುಷ, ವರುಷಗಳೆ ಕಳೆದು ಹೊಗುತ್ತವೆ. ’ಗಲ್ಲುಶಿಕ್ಷೆ’ ಕವಿತೆಯಲ್ಲಿ ನ್ಯಾಯಕ್ಕಾಗಿ ಸೋತಿರುವ ನಿರಾಪರಾಧಿಯ ಮೌನದ ಮಾತುಗಳನ್ನು ಜೊನ್ಸನ್ ಬೈಂದೂರ್ ಅರ್ಥಪೂರ್ಣವಾಗಿ ಬರೆದು ಕವಿತೆ ರಚಿಸಿದ್ದಾರೆ.]
– ಡೊಲ್ಫಿ ನಜ್ರೆತ್
ಗಲ್ಲುಶಿಕ್ಷೆ
ವಕೀಲರು ಕೇಳಿದ ಪ್ರಶ್ನೆಗೆ
ನಾನು ಸ್ತಬ್ದಮುಖನಾಗಿಯೇ
ನಿಂತಿದ್ದೆ .
ಆದರೆ
ನಿಂತಿದ್ದ ಚೌಕಟ್ಟಿಗೆ ಸತ್ಯ ತಿಳಿದಿತ್ತು.
ನ್ಯಾಯಾಧೀಶರು ಕೊಟ್ಟ ಅಂತಿಮ ತೀರ್ಪು
ಕೇಳಿದಾಗಲೂ ನಾನು ಸ್ತಬ್ದಮುಖನಾಗಿಯೇ
ನಿಂತಿದ್ದೆ.
ಆದರೆ...
ಅಂತಿಮ ತೀರ್ಪು ಬರೆಯಲು ಬಳಸಿದ
ಲೇಖನಿಗೆ ಸತ್ಯ ತಿಳಿದಿತ್ತು.
ಗಲ್ಲಿಗೇರಿಸುವ ಮುನ್ನ
ಕೊನೆಯ
ಆಸೆ ಕೇಳಿದಾಗಲೂ
ನಾನು ಸ್ತಬ್ದಮುಖನಾಗಿಯೇ
ನಿಂತಿದ್ದೆ.
ಆದರೆ...
ಕೊಟ್ಟ ಬಟ್ಟೆಗೆ, ಊಟತಟ್ಟೆಗೂ
ಸತ್ಯ ತಿಳಿದಿತ್ತು.
ಕಣ್ಣಿಗೆ ಬಟ್ಟೆಕಟ್ಟಿ
ನನ್ನ ಕುತ್ತಿಗೆಗೆ
ಉರುಳು ಧರಿಸಿದಾಗಲೂ
ನಾನು ಸ್ತಬ್ದಮುಖನಾಗಿಯೇ
ನಿಂತಿದ್ದೆ.
ಆದರೆ..
ಕುತ್ತಿಗೆಗೆ ಬಿಗಿಯಲಿರುವ ನೇಣಿಗೆ
ಸತ್ಯ ತಿಳಿದಿತ್ತು.!
ಎಲ್ಲದಕ್ಕೂ ನಾನು ಮೌನವಾಗಿದ್ದು
ಕಾಲ ಕೆಳಗಿನ ಹಲಗೆ
ಜಾರಿಸಿದಾಗಲೂ
ನನ್ನೊಳಗಿನ ಕೂಗು ಮಾತ್ರ
ಅದನ್ನೇ ಸಾರಿ ಸಾರಿ ಹೇಳುತಿತ್ತು.
ನ್ಯಾಯದೇವತೆಯನ್ನು
ಮೂರು ಕಾಸಿಗೆ
ಅವರೆಲ್ಲಾ ಸೇರಿ ಮಾರಿದರೇನು.?
ಅಪರಾಧಿ ನೀನಲ್ಲಯ್ಯಾ
ಸಾವಿನ ಪ್ರಾಣಪಕ್ಷಿ
ಖುಶಿಯಿಂದ ಹಾರಿಸು..!