[ಬಾಲ್ಯದ ಕೆಲವು ನೆನಪುಗಳೆ ಹಾಗೆ ಮಾಸಿ ಹೊದರು ಪದೆ ಪದೆ ನೆನಪಿನಂಗಳದಲ್ಲಿ ಬಂದು ತಂಗಾಳಿಯಾಗಿ ಬಿಸುತ್ತವೆ. ಬಾಲ್ಯ ಕಳೆದು ಜವಾಬ್ದಾರಿಯ ಕಡೆಗೆ ಹೆಜ್ಜೆ ಇಟ್ಟಂತೆ ಬಾಲ್ಯ ಯಾಕಾದಾರು ಮರೆಯಾಯ್ತು ಅನಿಸುತ್ತದೆ. ಹುಟ್ಟಿ ಬೆಳೆದ ಮನೆ, ಊರು, ಒಡನಾಟದ ಸಂಬಂಧಗಳನ್ನು ಬಿಟ್ಟು ಭವಿಷ್ಯ ರೂಪಿಸಲಿಕ್ಕೆ ಎಲ್ಲೆಲ್ಲೊ ಇದ್ದು ಪರಕೀಯರಾದವರಂತೆ ಮತ್ತೆ ಬಾಲ್ಯದ ಊರು, ಮನೆ ಮತ್ತು ಆ ಮನೆಯಲ್ಲಿರುವ ವಸ್ತುಗಳು, ದೃಷ್ಯಗಳು ಕೂಡ ತಮ್ಮದೆಂದು ಆ ಸಂಬಂಧಗಳು ಮತ್ತು ನೆನಪುಗಳು ಪುನಃ, ಪುನಃ ಕಾಡಿ ಬೆಸೆದು ಬಿಡುತ್ತವೆ. ಬಾಲ್ಯದ ಮನೆ ಮತ್ತು ಮನೆಯಲ್ಲಿರುವ ವಸ್ತುಗಳ ಸಂಬಂಧಗಳು ಜೊನ್ಸನ್ ಬೈಂದೂರ್ ಇವರ ಕವಿತೆಯ ಸಾಲುಗಳು ಭಾವಾನಾತ್ಮಕವಾಗಿ ಎಳೆದೊಯ್ಯುತ್ತವೆ.]
– ಡೊಲ್ಫಿ ನಜ್ರೆತ್
ಬಾಲ್ಯದ ಮನೆ ನೆನಪಲ್ಲೇ ಕೊನೆಯಾಯಿತೇ..?
ನಿನ್ನೆ ಹಳೆಯ ಕೆಲವು ವಸ್ತುಗಳು
ಮನೆ ಬಾಗಿಲಿಗೆ ಬಂದ ವ್ಯಾಪಾರಿಗೆ
ಕೊಡಲು ನಿರ್ಧರಿಸಿ,
ಮೈ ಮುರಿದ ಕೆಲವು
ವಸ್ತುಗಳನ್ನ ತಕ್ಕಡಿಯ
ಸಮಾನತೆಯ ಬೆಲೆಗೆ ನೀಡಿದೆ.
ಆತ ನಾನು ಮತ್ತೆ ತಿರುಗಿ
ಬಂದು ನಿಮ್ಮ ಹಣ ಪಾವತಿಸಿ
ಎಲ್ಲಾ ವಸ್ತುಗಳನ್ನ ಕೊಂಡು
ಹೋಗುವೆ ಅನ್ನುತಿರುವಾಗಲೇ...
ಅಲ್ಲೇ ಕಣ್ಣಿಗೆ ಬಿದ್ದ ಧೂಳು ಹಿಡಿದಿದ್ದ ಪೆಟ್ಟಿಗೆ ತೆರೆದಾಗ
ಅದರಲ್ಲಿದ್ದ ನಮ್ಮ ಹಳೆ ಮನೆಯ
ಭಾವಚಿತ್ರಗಳು ಕಣ್ಣಿಗೆ ಬಿದ್ದವು.
ಕುಂತ ಜಾಗದಲ್ಲೇ ಆ ಮನೆಯತ್ತ
ಹಾಗೇ ಸುಮ್ಮನೆ ನನ್ನ ಅಂತರಂಗ
ಹೊರಟು ಹೊಗಿತ್ತು.
ಹಳೆಯ ನೆನಪಿನ ದೃಶ್ಯಗಳು
ಕಣ್ಣಮುಂದೆ ಬಿಡಿಸಿ
ತೋರಿಸುತಿತ್ತು.
ಮನೆಯ ಅಂಗಳದಲ್ಲಿ ಕಂಡ ಮರ
ಒಣಗಿದ ಎಲೆ ಅಂಗಳಕ್ಕೆ ಉದುರಿಸಿ
ಅಂಗಳ ಶುಚಿಗೊಳಿಸುವ
ನೋವು ಕೊಟ್ಟರೆ
ಉರಿಬಿಸಿಲಿನಲ್ಲಿ ತಂಪು
ಮನೆಯ ಸುತ್ತಲು ಕೊಟ್ಟು ಅದೇ ಮರ
ಖುಶಿ ಕೊಡುತಿತ್ತು.
ಮನೆಯ ಮುಂಭಾಗದಿ ಕಟ್ಟಿದ
ಕ್ರಿಸ್ತನ ಶಿಲುಬೆ
ನಾನು ಶಿಸ್ತಿನ
ಪಾಠ ಮರೆತಾಗಲೆಲ್ಲಾ ನನ್ನ ತಂದೆ
ಮೊಣಕಾಲೂರಿಸಿ ಅದೇ
ಶಿಲುಬೆಯ ಮುಂದೆ ಕೈ ಜೋಡಿಸಿ
ನಿಲ್ಲಲು ಹೇಳುವ
ಶಿಕ್ಷೆಯ ದಿನವನ್ನು ನೆನಪಿಸುತಿತ್ತು.
ಮನೆಯ ಹಿಂದಿನ ಜಾಗವೆಲ್ಲಾ
ಆಡಿದ ಆಟಗಳು ಬಾಲ್ಯದ
ಸಣ್ಣ ಪುಟ್ಟ ನಲಿವಿನ ಕ್ಷಣಗಳಲ್ಲಿ
ಮೈ ಮರೆಸುತಿತ್ತು.
ಮನೆಯ ಒಳಗೆ ಪ್ರವೇಶಿಸಿದಾಗ
ತಂದೆ ತಾಯಿ ಅಕ್ಕ ತಂಗಿ ಅಣ್ಣ
ತಮ್ಮನ ಜೊತೆ ಕಳೆದ
ಒಲವಿನ ಸಂತಸದ ದಿನಗಳ
ಸಾಗರದಲ್ಲೇ ಮುಳುಗಿಸಿತ್ತು.
ಮನೆಯ ಕಿಟಕಿ ಬಾಗಿಲು ಮತ್ತು
ಪೀಠೋಪಕರಣಗಳು ನನ್ನ ನೋಡಿ
ಮಂದಹಾಸ ಬೀರುತಿದ್ದರೆ
ಅದರಲ್ಲಿ ಕಾಲುಮುರಿದ ಕುರ್ಚಿ ಒಂದು
ನಿನ್ನ ಬಾಲ್ಯದ ಕಪಿಚೇಷ್ಟೆಯಲ್ಲಿ ನನ್ನ ಕಾಲು
ಮುರಿಯಿತು ಅನ್ನುತ್ತಾ ತನ್ನ ನೋವು
ನನ್ನಲ್ಲಿ ಹೇಳಿ ವಾದ ಮಾಡುತಿತ್ತು.
ನಾನು ಇನ್ನೂ ಕನಸಿನ ಸಾಗರದ
ತಳಹದಿ ಮುನ್ನುಗ್ಗುತ್ತಿರಲು
ಯಾರೋ ನನ್ನ
ಬೆನ್ನು ತಟ್ಟಿದ ಹಾಗೆ ಆಯಿತು.
ಅಕ್ಕಪಕ್ಕದ
ಮನೆಯ ಹಳೆಯ ವಸ್ತುಗಳು ಒಟ್ಟುಗೂಡಿಸಿ
ತಂದ ವ್ಯಾಪಾರಿ ನೀವು ಯಾವ ಕನಸಲ್ಲಿ
ಮುಳುಗಿದ್ದೀರಿ ಅನ್ನುತ್ತಾ ಕೊಟ್ಟ ಕಾಸು
ಸರಿಯಾಗಿ ಇದೆಯಾ ನೋಡಿ ಎಂದು
ಹೊರಟು ಹೋದನು.
ಕನಸಿನ ರಥದಿಂದ ಬಿದ್ದ ಕ್ಷಣದಲ್ಲೇ
ನನ್ನ ಮುಂದೆ ನಾಲ್ಕು ಅಂತಸ್ತಿನ
ನಾನೇ ವಾಸವಿದ್ದ ಮನೆ ಇದ್ದರೂ
ಮನ ಮತ್ತೆ ಹಳೆ ಮನೆಯನ್ನೇ
ಹಂಬಲಿಸಿದರೂ ಅಸಹಾಯಕನಾಗಿ
ಕುಂತಲ್ಲೇ ಭಾವುಕನಾದೆ.
ಬಾಲ್ಯದ ದಿನಗಳನ್ನ
ಕಳೆದ ನಮ್ಮ ಹಳೆಮನೆಯ
ನೆನಪಿನ ಕನ್ನಡಿ
ಒಡೆದು ಚೂರಾಗುತಿರಲು
ನನ್ನ ಕಣ್ಣುಗಳು ಮಾತ್ರ
ಕಣ್ಣೀರಿನ ಸಾಗರದಲ್ಲೇ ಮುಳುಗಿದ್ದವು.